ದಾವಣಗೆರೆ:
ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಮತ್ತೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ಸತ್ಯ ಎಂದು ಹೇಳಿ, ಈ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇದೆ ಎಂದು ತಿಳಿಸಿದರು.
“ಡಿ.ಕೆ. ಶಿವಕುಮಾರ್ ಅವರಿಗೆ 139 ಶಾಸಕರ ಬೆಂಬಲ ಇದೆ. ನಮ್ಮಂತ 40ರಿಂದ 50 ಯುವ ಶಾಸಕರು ಡಿಕೆಶಿ ಏನು ಹೇಳಿದರೂ ಮಾಡಲು ಸಿದ್ಧರಾಗಿದ್ದೇವೆ. ಅವರು ಪ್ರಾಣ ಕೇಳಿದರೂ ಕೊಡಲು ಸಿದ್ಧ” ಎಂದು ಶಿವಗಂಗಾ ಬಸವರಾಜ್ ಹೇಳಿದರು.
ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಹೇಳಿಕೆಗಳನ್ನು ಪದೇಪದೇ ನೀಡುತ್ತಿರುವ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪಕ್ಷದ ನಾಯಕತ್ವವೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು, ಪಕ್ಷದ ಹೈಕಮಾಂಡ್ ಎಂದರೆ
ರಾಹುಲ್ ಗಾಂಧಿ,
ಮಲ್ಲಿಕಾರ್ಜುನ ಖರ್ಗೆ ಹಾಗೂ
ಪ್ರಿಯಾಂಕಾ ಗಾಂಧಿ ಆಗಿದ್ದಾರೆ ಎಂದು ಹೇಳಿದರು.
“ಡಿಕೆಶಿ ಸಾಹೇಬರು ಹೇಳಿದಂತೆ ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್ ಅಲ್ಲ. ಪದೇಪದೇ ಮಾಧ್ಯಮಗಳ ಮುಂದೆ ಬಂದು ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ಮಾತನಾಡಲಾಗುತ್ತಿದೆ. ಸಿದ್ದರಾಮಯ್ಯ ಅವರ ಹೈಕಮಾಂಡ್ ಯತೀಂದ್ರ ಆಗಿರಬಹುದು. ಆದರೆ ನಮ್ಮ ಪಕ್ಷದ ಹೈಕಮಾಂಡ್ ಬೇರೆ ಇದೆ” ಎಂದು ಶಿವಗಂಗಾ ಬಸವರಾಜ್ ಸ್ಪಷ್ಟಪಡಿಸಿದರು.