ಯತೀಂದ್ರ ಅವರೇ ನಮ್ಮ ಹೈಕಮಾಂಡ್: ಡಿಕೆಶಿ

ಮಂಗಳೂರು:
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್,
“ಯತೀಂದ್ರರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಅವರ ಮಾತನ್ನೇ ಗೌರವದಿಂದ ಸ್ವೀಕರಿಸೋಣ. ಈ ಬಗ್ಗೆ ನನಗೆ ಪ್ರತಿಕ್ರಿಯಿಸಲು ಇಷ್ಟವಿಲ್ಲ. ದೆಹಲಿಯವರೇ ಪ್ರತಿಕ್ರಿಯೆ ನೀಡಬೇಕು” ಎಂದು ಹೇಳಿದರು.

ಐದು ವರ್ಷಗಳ ಕಾಲ
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ, ನಾಯಕತ್ವ ಬದಲಾವಣೆ ಇರುವುದಿಲ್ಲ ಎಂಬ ಹೈಕಮಾಂಡ್ ಸಂದೇಶವಿದೆ ಎಂದು
ಯತೀಂದ್ರ ಸಿದ್ದರಾಮಯ್ಯ ಹೇಳಿದ್ದ ಕುರಿತು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಡಿಕೆ ಶಿವಕುಮಾರ್ ಈ ರೀತಿ ಪ್ರತಿಕ್ರಿಯಿಸಿದರು.

ಪುತ್ತೂರು ಕಾಂಗ್ರೆಸ್ ಕಚೇರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಸ್ಲಿಂ ಮುಖಂಡರ ಹೆಸರು ಕೈಬಿಟ್ಟ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಜಾತಿ ಆಧಾರಿತ ರಾಜಕಾರಣ ಮಾಡುವುದಿಲ್ಲ, ನೀತಿಯ ಆಧಾರದ ಮೇಲೆ ರಾಜಕಾರಣ ಮಾಡುತ್ತದೆ. ಎಲ್ಲ ಜಾತಿ ಮತ್ತು ಧರ್ಮಗಳಿಗೂ ಕಾಂಗ್ರೆಸ್ ಪಕ್ಷ ಅಗತ್ಯವಿದೆ. ರಾಜಕಾರಣದಲ್ಲಿ ಧರ್ಮ ಇರಬಹುದು, ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಹೇಳಿದರು.

ಮಾರ್ಚ್‌ನಲ್ಲಿ 100 ಪಕ್ಷದ ಕಚೇರಿಗಳಿಗೆ ಚಾಲನೆ

ರಾಜ್ಯಾದ್ಯಂತ ಪಕ್ಷ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ 100 ಕಚೇರಿಗಳಿಗೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳನ್ನು ನಡೆಸಲು ನಿರ್ದೇಶನ ನೀಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮಾರ್ಚ್ 10ರಂದು ತಮ್ಮ ರಾಜಕೀಯ ಜೀವನದಲ್ಲಿ ಮಹತ್ವದ ದಿನವಿದ್ದು, ಆ ದಿನಕ್ಕೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *

Scroll to Top