ಬೆಂಗಳೂರು:
ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವಕ್ಕೆ ಸರ್ಕಾರ ಬಿಡುಗಡೆ ಮಾಡಬೇಕಾದ ಅನುದಾನದಲ್ಲಿಯೇ ಶೇ.20ರಷ್ಟು ಕಮಿಷನ್ ಕೇಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ
ಆರ್. ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಕರಗ ಉತ್ಸವದ ಅನುದಾನ ಬಿಡುಗಡೆಗೂ ಕಮಿಷನ್ ಕೇಳಲಾಗುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ, ಹಿಂದೂ ಧರ್ಮ, ಹಿಂದೂಗಳು ಹಾಗೂ ಹಿಂದೂಗಳ ಆಚರಣೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಯಾಕೆ ಅಸಡ್ಡೆ ಹಾಗೂ ದ್ವೇಷ ಎಂಬ ಪ್ರಶ್ನೆ ಎತ್ತಿದರು.
ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವಕ್ಕೆ ಸರ್ಕಾರ ಬಿಡುಗಡೆ ಮಾಡಬೇಕಾದ ಹಣದಲ್ಲಿಯೇ ಕಮಿಷನ್ ಕೇಳಲಾಗುತ್ತಿರುವುದು ಸರ್ಕಾರದ ಲಜ್ಜೆಗೇಡಿತನವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಇದೇ ವೇಳೆ,
**ಧರ್ಮರಾಯ ಸ್ವಾಮಿ ದೇವಸ್ಥಾನ**ದ ಕರಗ ಉತ್ಸವ ಮತ್ತು ದೈನಂದಿನ ನಿರ್ವಹಣೆಗೆ ಸಂಬಂಧಿಸಿ ಮುಜರಾಯಿ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿವೆ.
ಧರ್ಮರಾಯ ದೇವಸ್ಥಾನ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಕೆ. ಸತೀಶ್ ಅವರು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಅವರು ದೇವಸ್ಥಾನದಿಂದ ಸುಮಾರು 122 ಗ್ರಾಂ ತೂಕದ ಚಿನ್ನದ ಹಾರವನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.