ಹುಬ್ಬಳ್ಳಿ:
ಸರ್ಕಾರಿ ನೌಕರರು ತಿಂಗಳ ಮೊದಲ ಶನಿವಾರ ಕಡ್ಡಾಯವಾಗಿ ಖಾದಿ ಉಡುಪು ಧರಿಸಬೇಕು ಎಂಬ ರಾಜ್ಯ ಸರ್ಕಾರದ ನಿರ್ಧಾರದಿಂದ ಖಾದಿ ಮಂಡಳಿ ಹಾಗೂ ಖಾದಿ ಉತ್ಪಾದಕರಲ್ಲಿ ಹೊಸ ಆಶಾವಾದ ಮೂಡಿದ್ದು, ಖಾದಿ ಉದ್ಯಮಕ್ಕೆ ಮರುಜೀವ ದೊರೆತಂತಾಗಿದೆ.
ರಾಜ್ಯದಲ್ಲಿ
Khadi and Village Industries Commission
(ಕೆವಿಐಸಿ)ಯಲ್ಲಿ ನೋಂದಣಿಯಾದ ಒಟ್ಟು 176 ಖಾದಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಖಾದಿ ಕ್ಷೇತ್ರದಲ್ಲಿ ಸುಮಾರು 55 ಸಾವಿರ ಮಂದಿ ಉದ್ಯೋಗ ಪಡೆದಿದ್ದು, ಅವರಲ್ಲಿ ಶೇ.90ರಷ್ಟು ಮಹಿಳೆಯರು ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಖಾದಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಸರ್ಕಾರದ ಈ ಆದೇಶದಿಂದ ಖಾದಿ ಬಟ್ಟೆಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಉಂಟಾಗಲಿದೆ ಎಂಬ ನಿರೀಕ್ಷೆಯನ್ನು ಖಾದಿ ಸಂಘಗಳು ವ್ಯಕ್ತಪಡಿಸಿವೆ. ಜೊತೆಗೆ, ಶುದ್ಧ ಹಾಗೂ ಮಾನ್ಯತೆ ಪಡೆದ ಖಾದಿ ಕೇಂದ್ರಗಳಿಂದಲೇ ನೌಕರರು ಖಾದಿ ಬಟ್ಟೆ ಖರೀದಿಸುವಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿವೆ.
ಈ ಹಿಂದೆ ಸರ್ಕಾರ ಮತ್ತು ವಿವಿಧ ಪ್ರಾಧಿಕಾರಗಳಿಗೆ ವಾರಕ್ಕೆ ಒಂದು ದಿನ ಖಾದಿ ಕಡ್ಡಾಯಗೊಳಿಸುವಂತೆ
Karnataka Khadi and Village Industries Board ಸರ್ಕಾರಕ್ಕೆ ಮನವಿ ಮಾಡಿತ್ತು. ಇದೀಗ ತಿಂಗಳಲ್ಲಿ ಒಂದು ದಿನ ಖಾದಿ ಕಡ್ಡಾಯಗೊಳಿಸಿರುವುದೇ ಕುಂಟುತ್ತ ಸಾಗುತ್ತಿದ್ದ ಖಾದಿ ಉದ್ಯಮಕ್ಕೆ ದೊಡ್ಡ ಉತ್ತೇಜನ ನೀಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರಸ್ತುತ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ವ್ಯಾಪ್ತಿಯಲ್ಲಿ ಸುಮಾರು 20 ಕೋಟಿ ರೂ. ಮೌಲ್ಯದ ಖಾದಿ ಬಟ್ಟೆ ದಾಸ್ತಾನ ಲಭ್ಯವಿದ್ದು, ರಾಜ್ಯಾದ್ಯಂತ ಖಾದಿ, ಉಲನ್ ಹಾಗೂ ರೇಷ್ಮೆ ಸಂಸ್ಥೆಗಳನ್ನು ಒಳಗೊಂಡಂತೆ 176 ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಎಲ್ಲ ಜಿಲ್ಲೆಗಳಲ್ಲಿಯೂ ಖಾದಿ ಉಡುಪುಗಳು ಸುಲಭವಾಗಿ ಲಭ್ಯವಾಗುತ್ತಿವೆ.
ಸರ್ಕಾರಿ ನೌಕರರು ಈಗಾಗಲೇ ಖಾದಿ ಕೇಂದ್ರಗಳಿಗೆ ಭೇಟಿ ನೀಡಿ ಖರೀದಿ ಮಾಡುತ್ತಿರುವುದು ಕಂಡುಬರುತ್ತಿದೆ. ಮಹಿಳೆಯರಿಗೆ ಸೀರೆ, ಚೂಡಿದಾರ್‌ಗಳೊಂದಿಗೆ, ಪುರುಷರಿಗೆ ಪ್ಯಾಂಟ್–ಶರ್ಟ್, ಓವರ್‌ಕೋಟ್ ಸೇರಿದಂತೆ ವಿವಿಧ ಮಾದರಿಯ ಉಡುಪುಗಳು ಲಭ್ಯವಿವೆ. ಖರೀದಿಸಿದ ಬಟ್ಟೆಗಳನ್ನು ಇಷ್ಟದಂತೆ ಹೊಲಿಸಿಕೊಳ್ಳುವ ವ್ಯವಸ್ಥೆಯೂ ಖಾದಿ ಕೇಂದ್ರಗಳಲ್ಲಿ ಇದೆ.
ಇದೇ ವೇಳೆ, ರಾಜ್ಯದ ಕೆಲವು ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳಲ್ಲಿ ಖಾದಿ ಜುಬ್ಬಾ ಮತ್ತು ಪಾಯಿಜಾಮ ಧರಿಸುವ ಪದ್ಧತಿ ಈಗಾಗಲೇ ಜಾರಿಯಲ್ಲಿದೆ. ಧಾರವಾಡದ ಐಐಟಿ ಸಂಸ್ಥೆ ಪ್ರತೀ ಘಟಿಕೋತ್ಸವಕ್ಕೆ ಖಾದಿ ಬಟ್ಟೆ ಖರೀದಿಗೆ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದು, ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ವಾರಕ್ಕೆ ಒಂದು ದಿನ ಖಾದಿ ಉಡುಪು ಧರಿಸುವ ಪದ್ಧತಿ ಜಾರಿಯಲ್ಲಿದೆ.
ಅಲ್ಲದೆ, ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತೀ ಶುಕ್ರವಾರ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಖಾದಿ ಉಡುಪು ಧರಿಸುತ್ತಿರುವುದು ಖಾದಿ ಬಳಕೆಗೆ ಇನ್ನಷ್ಟು ಬಲ ನೀಡಿದೆ.