ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಣೆ: ದೇವೇಗೌಡ ಮನವಿ

ನವದೆಹಲಿ:
ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚಿನ ಅನುದಾನ ಮಂಜೂರು ಮಾಡಿ ಪ್ರಮುಖ ಯೋಜನೆಗಳನ್ನು ಘೋಷಿಸಿರುವುದಕ್ಕೆ ಮಾಜಿ ಪ್ರಧಾನಿ
ಎಚ್.ಡಿ. ದೇವೇಗೌಡ ಅವರು ಕೇಂದ್ರ ರೈಲ್ವೆ ಸಚಿವ
ಅಶ್ವಿನಿ ವೈಷ್ಣವ್ ಅವರನ್ನು ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ದೇವೇಗೌಡರು, ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಅನ್ನು ಬೀದರ್ ವರೆಗೆ ವಿಸ್ತರಿಸಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಸಚಿವರಿಗೆ ಪತ್ರ ಬರೆದಿರುವ ಅವರು, 2026ರ ಕೇಂದ್ರ ಬಜೆಟ್‌ನಲ್ಲಿ ಸುಮಾರು 4,000 ಕಿ.ಮೀ ವ್ಯಾಪ್ತಿಯ ಏಳು ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿರುವುದನ್ನು ಶ್ಲಾಘಿಸಿದ್ದಾರೆ. ಈ ಕಾರಿಡಾರ್‌ಗಳು ಅಭಿವೃದ್ಧಿಗೆ ಪ್ರಮುಖ ಸಂಪರ್ಕ ಸೇತುವೆಗಳಾಗಿ ಕಾರ್ಯನಿರ್ವಹಿಸಲಿದ್ದು, ಸುಸ್ಥಿರ ಸಾರಿಗೆ ವ್ಯವಸ್ಥೆ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿವೆ ಎಂದು ಹೇಳಿದ್ದಾರೆ.

ಚೆನ್ನೈ–ಬೆಂಗಳೂರು–ಹೈದರಾಬಾದ್ ಕಾರಿಡಾರ್‌ ದಕ್ಷಿಣ ಭಾರತದಲ್ಲಿ ಅತಿ ವೇಗದ ತ್ರಿಕೋನ ಸಂಪರ್ಕವನ್ನು ರೂಪಿಸಲಿದೆ. ಇದರಿಂದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಜನರ ಪ್ರಯಾಣ ಅಗತ್ಯತೆಗಳಿಗೆ ನೇರ ಲಾಭ ದೊರೆಯಲಿದ್ದು, ಕೇರಳ ಹಾಗೂ ಪುದುಚೇರಿಗೂ ಸಹ ಅನುಕೂಲವಾಗಲಿದೆ ಎಂದು ದೇವೇಗೌಡರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಯೋಜನೆಯನ್ನು
ಬೀದರ್ ವರೆಗೆ ವಿಸ್ತರಿಸಿದಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಸಂಪರ್ಕ ಮತ್ತು ಅಭಿವೃದ್ಧಿಗೆ ಮಹತ್ವದ ಬಲ ಸಿಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top